ಪ್ರಪಂಚದ ಸಂವಿಧಾನಗಳ ವರ್ಗೀಕರಣ
ಸಂವಿಧಾನ:- ಸಂವಿಧಾನವು ಒಂದು ರಾಷ್ಟ್ರದ ಪರಮೋಚ್ಚ ಕಾನೂನು ಮತ್ತು ಆ ದೇಶದ ಮೂಲಭೂತ ರಾಜಕೀಯ ದಾಖಲೆ ಆಗಿದ್ದು ಅದು ತನ್ನ ಪ್ರಜೆಗಳನ್ನು ಆಳ್ವಿಕೆಗೆ ಒಳಪಡಿಸಬೇಕಾದ ಮೂಲಭೂತ ರಾಜಕೀಯ ವ್ಯವಸ್ಥೆಯನ್ನು ಸಂವಿಧಾನ ರೂಪಿಸುತ್ತದೆ.
ಸಂವಿಧಾನ ಆ ದೇಶದ ಜನಗಳ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಮನೋಧರ್ಮಗಳನ್ನಾಧರಿಸಿದೆ.
ಸಂವಿಧಾನವು ಅದರ ಪ್ರವರ್ತಕರ ಅಭಿಲಾಷೆ ಮತ್ತು ಆಶೋತ್ತರಗಳನ್ನು ಪ್ರತಿಬಿಂಬಿಸುತ್ತದೆ. ಹಾಗೂ ಸಂವಿಧಾನವು ಒಂದು ಜಡ ದಾಖಲೆಯಾಗಿರದೆ ಅದು ಜನರ ಬದಲಾಗುವ ಅಗತ್ಯತೆಗಳಿಗೆ ಸ್ಪಂದಿಸುವ ಚಲನಶೀಲ ಕಾನೂನಾಗಿದೆ.
ಸಂವಿಧಾನವು ಪ್ರಮುಖವಾಗಿ ಲಿಖಿತ ರೂಪದಲ್ಲಿ ಇರಬಹುದು ಅಥವಾ ಅಲಿಖಿತ (ರೂಢಿ, ಆಚಾರ, ವಿಚಾರ ಮತ್ತು ಸಂಪ್ರದಾಯ) ರೂಪದಲ್ಲಿರಬಹುದು. ಪ್ರಪಂಚದಲ್ಲಿರುವ ಸಂವಿಧಾನಗಳನ್ನು ಸ್ಥೂಲವಾಗಿ ಈ ರೀತಿಯಾಗಿ ವರ್ಗಿಕರಿಸಬಹುದಾಗಿದೆ.
1. ಲಿಖಿತ ಸಂವಿಧಾನ (Written Constitution)
2. ಅಲಿಖಿತ ಸಂವಿಧಾನ (Unwritten Constitution)
3. ನಮ್ಯ ಸಂವಿಧಾನ (Flexible Constitution)
4. ಅನಮ್ಯ ಸಂವಿಧಾನ (Rigid Constitution)
5. ಏಕಾತ್ಮಕ ಸಂವಿಧಾನ (Unitary Constitution)
6. ಒಕ್ಕೂಟ ಸಂವಿಧಾನ (Federal Constitution)
7.ವಿಕಸಿತ ಸಂವಿಧಾನ (Evolved Constitution)
8.ಅಧಿನಿಯಮಿತ ಸಂವಿಧಾನ (Enacted Constitution)
ಸಂವಿಧಾನ ಒಂದು ಜಡ ದಾಖಲೆಯಾಗಿರದೆ ಅದು ಜನರ ಬದಲಾಗುವ ಅಗತ್ಯಗತೆಗಳಿಗೆ ಸ್ಪಂದಿಸುವ ಚಲನಶೀಲ ಕಾನೂನು ಆಗಿದೆ. ಜನರ ಇಚ್ಚೇಗಳಿಗೆ ಅನುಗುಣವಾಗಿ ಮತ್ತು ದೇಶದ ನ್ಯಾಯಾಲಯಗಳ ಅರ್ಥವಿವರಣೆಗೆ ಅನುಗುಣವಾಗಿ ಅದು ಬದಲಾವಣೆಗೊಳ್ಳುತ್ತದೆ. ಪ್ರಜಾಪ್ರಭುತ್ವದಲ್ಲಿ ಸಂವಿಧಾನ, ಅಧಿಕಾರಶಾಹಿ ಹಾಗೂ ನಿರಂಕುಶ ಆಡಳಿತದ ವಿರುದ್ಧ ಒಂದು ಜೀವಂತ ದಸ್ತಾವೇಜು, ಪ್ರಜಾಪ್ರಭುತ್ವದಲ್ಲಿ ಮಾನವರ ಆಳ್ವಿಕೆಗಿಂತ ಕಾನೂನಿನ ಆಳ್ವಿಕೆಯನ್ನು ಸಂವಿಧಾನ ಬೆಂಬಲಿಸುತ್ತದೆ.
1. ಲಿಖಿತ ಸಂವಿಧಾನ (Written Constitution)
ಸಂವಿಧಾನವು ಲಿಖಿತ ಅಂದರೆ ಬರವಣಿಗೆಯ ರೂಪದಲ್ಲಿ ಇರುವ ಸಂವಿಧಾನವೆ ಲಿಖಿತ ಸಂವಿಧಾನವಾಗಿದೆ. ಇದು ಜನ ಪ್ರತಿನಿಧಿಗಳನ್ನೊಳಗೊಂಡ ಸಂವಿಧಾನ ರಚನಾ ಸಭೆ ಎಂದು ಕರೆಯಲ್ಪಡುವ ಒಂದು ಸಮಿತಿಯಿಂದ ರೂಪಿಸಲ್ಪಟ್ಟ ಸಂವಿಧಾನವಾಗಿರುತ್ತದೆ. ಈ ಲಿಖಿತ ಸಂವಿಧಾನದ ತಿದ್ದುಪಡಿಗೆ ಒಂದು ವಿಶೇಷವಾದ ಪ್ರಕ್ರಿಯೆ ಅಗತ್ಯವಿದೆ.
ಲಿಖಿತ ಸಂವಿಧಾನ ಹೊಂದಿರುವ ರಾಷ್ಟ್ರಗಳು:
ಅಮೇರಿಕದ ಸಂವಿಧಾನ,
ಭಾರತದ ಸಂವಿಧಾನ,
ಕೆನಡಾ ಸಂವಿಧಾನ ಮತ್ತು
ಆಸ್ಟ್ರೇಲಿಯಾ ಸಂವಿಧಾನ
2. ಅಲಿಖಿತ ಸಂವಿಧಾನ (Unwritten Constitution)
ಇದು ಬರವಣಿಗೆ(ಲಿಖಿತ) ರೂಪದಲ್ಲಿ ಇರದೇ ಇರುವ ಸಂವಿಧಾನವಾಗಿದೆ.
ಲಿಖಿತ ದಾಖಲೆಯಾಗಿಲ್ಲದೆ ಸಾಂಪ್ರದಾಯಿಕ ಪದ್ದತಿಗಳು, ನ್ಯಾಯಾಲಯಗಳ ತೀರ್ಮಾನಗಳು, ಸಾಮಾನ್ಯ ಕಾನೂನು ತತ್ತ್ವಗಳು ಮತ್ತು ಪ್ರಕ್ರಿಯೆಗಳಿಂದ ರೂಪಿತವಾದ ಸಂವಿಧಾನವನ್ನು ಅಲಿಖಿತ ಸಂವಿಧಾನವೆಂದು ಕರೆಯಲಾಗುತ್ತದೆ. ಇದು ಲಿಖತ ಸಂವಿಧಾನಕ್ಕಿಂತಲು ಹೆಚ್ಚು ಬದಲಾವಣೆಗೆ ಒಳಗಾಗಬಲ್ಲ ಸಂವಿಧಾವಾಗಿದ್ದು ಸುಲಭವಾಗಿ ತಿದ್ದುಪಡಿಗೊಳ್ಳುವಂತಹ ಸಂವಿಧಾನ ಸಹ ಆಗಿರುತ್ತದೆ.
ಅಲಿಖಿತ ಸಂವಿಧಾನ ಹೊಂದುರುವ ರಾಷ್ಟ್ರಗಳು: ಬ್ರಿಟನ್ ಮತ್ತು ನ್ಯೂಜಿಲ್ಯಾಂಡ್
ಬ್ರಿಟಿಷ್ ಸಂವಿಧಾನ, ಕಾನೂನುಗಳನ್ನು ಮಾಡುವಲ್ಲಿ ಅಥವಾ ಕಾನೂನನ್ನು ತೆಗದು ಹಾಕುವುದರಲ್ಲಿ ಸಂಸತ್ತಿಗೆ ಪರಮಾಧಿಕಾರ ಹೊಂದಿರುವುದು ಮತ್ತು ಅಲ್ಲಿ ಸಂವಿಧಾನಾತ್ಮಕ ಕಾನೂನು ಹಾಗೂ ಸಾಮಾನ್ಯ ಕಾನೂನು ನಡುವೆ ಹೆಚ್ಚು ಭಿನ್ನತೆ ಇರುವುದಿಲ್ಲ.
3. ನಮ್ಯ ಸಂವಿಧಾನ (Flexible Constitution)
ನಮ್ಯ ಎಂದರೆ ಸುಲಭ ಅಥವಾ ಸರಳವಾಗಿ ತಿದ್ದುಪಡಿಗಳನ್ನು ತರಬಹುದಾಧ ಸಂವಿಧಾನವಾಗಿದೆ.ಬ್ರಿಟನ್ ಸಂವಿಧಾನ ಭಾಗಶ: ಮುಖ್ಯ ಶಾಸನಗಳನ್ನು ಮತ್ತು ಭಾಗಶ: ಅಲಿಖಿತ ಸಂಪ್ರದಾಯಗಳನ್ನು ಒಳಗೊಂಡಿದೆ. ಬ್ರಿಟನ್ ಸಂವಿಧಾನ ಶಾಸನಗಳನ್ನು ಸಂಸತ್ತಿನ ಒಂದು ಸರಳ ಅಧಿನೀಯಮದ ಮೂಲಕ ತಿದ್ದುಪಡಿ ಮಾಡಬಹುದಾಗಿದೆ.
ಹೀಗೆ ಸುಲಭವಾಗಿ ತಿದ್ದುಪಡಿ ಮಾಡುವ ನಿಯಮವನ್ನು ಹೊಂದಿರುವ ಸಂವಿಧಾನವು ನಮ್ಯ ಸಂವಿಧಾನ (Flexible Constitution) ವಾಗಿದೆ.
ಉದಾಹರಣೆ: ಬ್ರಿಟನ್ ಸಂವಿಧಾನ ಮತ್ತು ಇಸ್ರೇಲ್ ಸಂವಿಧಾನ
4. ಅನಮ್ಯ ಸಂವಿಧಾನ (Rigid Constitution)
ಅನಮ್ಯ ಎಂದರೆ ಸುಲಭ ಅಥವಾ ಸರಳವಾಗಿ ತಿದ್ದುಪಡಿಗಳನ್ನು ತರಲು ಆಗದೆ ಇರುವ ಸಂವಿಧಾನವಾಗಿದೆ.ದೇಶದ ಇತರ ಕಾನೂನುಗಳ ರೀತಿಯಲ್ಲಿ ಇದನ್ನು ಸುಲಭವಾಗಿ ತಿದ್ದುಪಡಿ ಮಾಡಲು ಸಾಧ್ಯವಾಗುವುದಿಲ್ಲ. ತಿದ್ದುಪಡಿಗೆ ವಿಶೇಷ ನಿಯಮಗಳನ್ನು ಅನುಸರಿಬೇಕಾಗುತ್ತದೆ. ಕಠಿಣವಾದ ತಿದ್ದುಪಡಿ ನಿಯಮಗಳನ್ನು ಹೊಂದಿರುವ ಸಂವಿಧಾನವು ಅನಮ್ಯ ಸಂವಿಧಾನ (Rigid Constitution)ವಾಗಿದೆ.
ಎ.ವಿ.ಡೈಸಿಯವರ ಪ್ರಕಾರ: "ಸಂವಿಧಾನಿಕ ಕಾನೂನುಗಳು ಅಥವಾ ಕೆಲವು ಮೂಲಭೂತ ಕಾನೂನುಗಳನ್ನು ಸಾಮಾನ್ಯ ಕಾನೂನುಗಳಂತೆ ಬದಲಾಯಿಸಲು ಸಾಧ್ಯವಿರದೆ ಇರುವ ಸಂವಿಧಾನವೇ ಅನಮ್ಯ ಅಥವಾ ಕಠೀಣ ಸಂವಿಧಾನ."
ಉದಾಹರಣೆ: ಆಸ್ಟ್ರೇಲಿಯಾ ಸಂವಿಧಾನವು ಕಠಿಣ ಸಂವಿಧಾನವಾಗಿದೆ.
5. ಏಕಾತ್ಮಕ ಸಂವಿಧಾನ (Unitary Constitution)
ಏಕಾತ್ಮಕ ಸಂವಿಧಾನದ ಪ್ರಧಾನ ಲಕ್ಷಣವೆಂದರೆ ಅಧಿಕಾರದ ಕೇಂದ್ರೀಕರಣ. ಕೇಂದ್ರ ಬಹಳ ಶಕ್ತಿಯುತ ಅಥವಾ ಪ್ರಭಲಾಗಿದ್ದು ರಾಜ್ಯಗಳು ಕೇವಲ ಕೇಂದ್ರದ ಪ್ರತಿನಿಧಿಗಳಾಗಿ ವರ್ತಿಸುತ್ತವೆ. ರಾಜ್ಯಗಳ ಕಾರ್ಯನಿರ್ವಹಣೆಯ ಸ್ವಾತಂತ್ರ್ಯ ಬಹಳ ಸೀಮಿತವಾಗಿರುತ್ತದೆ.
ಸರ್ಕಾರದ ಎಲ್ಲಾ ಅಧಿಕಾರಗಳು ಕೇಂದ್ರ ಸರ್ಕಾರದಲ್ಲಿ ಕೇಂದ್ರಿಕೃತವಾಗಿದ್ದು, ಪ್ರಾಂತ್ಯಗಳು ಕೇಂದ್ರಕ್ಕೆ ಅಧೀನವಾಗಿರುತ್ತವೆ.
ಉದಾಹರಣೆ: ಬ್ರಿಟನ್
6. ಒಕ್ಕೂಟ ಸಂವಿಧಾನ (Federal Constitution)
ಈ ಸಂವಿಧಾನದಲ್ಲಿ ಅಧಿಕಾರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ವಿಭಜನೆ ಹೊಂದಿರುತ್ತವೆ. ಇಲ್ಲಿ ಇಬ್ಬರು ಸಹ ತಮ್ಮದೇ ಆದ ಕ್ಷೇತ್ರದಲ್ಲಿ ಸ್ವತಂತ್ರರಾಗಿರುತ್ತಾರೆ. ಸಂವಿಧಾನೇ ಒಕ್ಕೂಟ (ಕೇಂದ್ರ) ಮತ್ತು ರಾಜ್ಯಗಳ ನಡುವೆ ಅಧಿಕಾರಗಳನ್ನು ವಿತರಿಸುತ್ತದೆ. ಸಂವಿಧಾನಾತ್ಮಕ ಉಪಬಂಧಗಳನ ಅರ್ಥವಿವರಣೆ ಮಾಡಲು ಒಂದು ಸ್ವತಂತ್ರ ನ್ಯಾಯಾಂಗವಿರುತ್ತದೆ.
ಉದಾಹರಣೆ: ಅಮೆರಿಕಾ ಸಂವಿಧಾನ
7.ವಿಕಸಿತ ಸಂವಿಧಾನ (Evolved Constitution)
ಈ ಸಂವಿಧಾನವು ಒಂದು ನಿರ್ದೀಷ್ಟ ಸಮಯದಲ್ಲಿ ರೂಪಿಸಲಾಗಿಲ್ಲ. ಇದು ಕಾಲಕ್ರಮೇಣ ಬೆಳವಣಿಗೆಯಾದ ಸಾಂಪ್ರದಾಯಿಕ ಬಳಕೆ, ಪದ್ದತಿಗಳು, ಆಚರಣೆಗಳಿಂದ ಮೂಡಿಬಂದ ಸಂವಿಧಾನವಾಗಿದೆ. ಉದಾಹರಣೆಯಾಗಿ ಬ್ರಿಟಿಷ ಸಂವಿಧಾನವು ಯಾವುದೇ ಒಂದು ಸಂವಿಧಾನ ರಚನಾ ಸಭೆಯಿಂದ ರಚಿಸಲಾಗಿಲ್ಲ ಮತ್ತು ಒಂದು ನಿರ್ದಿಷ್ಟ ದಿನಾಂಕದಂದು ಜಾರಿಗೊಳಿಸಲಾಗಿಲ್ಲ, ಇಲ್ಲಿ ಎಲ್ಲವು ಕ್ರಮೇಣವಾಗಿ ರೂಢಿ, ಆಚಾರ, ವಿಚಾರ, ಸಂಪ್ರದಾಯಗಳ ಮೂಲಕವಾಗಿ ಬೆಳೆದು ಬಂದಿರುವಂತಹುದು ಆಗಿದೆ.
ವಿಕಸಿತ ಸಂವಿಧಾನಕ್ಕೆ ಉದಾಹರಣೆ: ಬ್ರಿಟನ್ ಸಂವಿಧಾನ
8.ಅಧಿನಿಯಮಿತ ಸಂವಿಧಾನ (Enacted Constitution)
ಅಧಿನಿಯಮಿತ ಸಂವಿಧಾನವು ಮನುಷ್ಯ ಉದ್ದೇಶಪೂರ್ವಕವಾಗಿ ಅಥವಾ ಪ್ರಜ್ಞಾಪೂರ್ವಕವಾಗಿ ರಚಿಸಿರುವ ಸಂವಿಧಾನವಾಗಿದೆ. ಇದನ್ನು ಸಂವಿಧಾನ ರಚನಾ ಸಭೆ, ಸಾರ್ವಭೌಮ ಪ್ರಾಧಿಕಾರ, ರಾಜ ಅಥವಾ ಸಂಸತ್ತು, ಇವರುಗಳ ಆಜ್ಞೇಯಿಂದ ರಚಿತವಾಗಿರುತ್ತದೆ. ಇದು ಸಾಮಾನ್ಯವಾಗಿ ಧಾಖಲೆಗಳ ರೂಪದಲ್ಲಿ ರಚಿತವಾಗಿರುತ್ತದೆ.
ಜನ ಪ್ರತಿನಿಧಿ ಸಭೆಯಿಂದ ಅಧಿನಿಯಮಿಸಲ್ಪಟ್ಟು ಪರಮೋಚ್ಚ ಕಾನೂನಾಗಿ ಸ್ಥಾಪಿತವಾದ ಸಂವಿಧಾನವೇ ಅಧಿನಿಯಮಿತ ಸಂವಿಧಾನವಾಗಿದೆ.
ಉದಾಹರಣೆ: ಭಾರತ ಸಂವಿಧಾನ, ಅಮೇರಿಕಾ ಸಂವಿಧಾನ
No comments:
Post a Comment